ನವದೆಹಲಿ, 30 ನವೆಂಬರ್ (ಹಿ.ಸ):
ಆ್ಯಂಕರ್ :
ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಡಿ ಯಶಸ್ವಿಯಾಗಿ ಅನುಷ್ಠಾನಗೊಂಡ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವರ್ಚುವಲ್ ಸಂವಾದ ನಡೆಸಿದರು. ನಿಗದಿತ ಸಮಯದಲ್ಲಿ ಯೋಜನೆಗಳನ್ನು ಸರ್ವರಿಗೂ ತಲುಪಿಸುವ ಗುರಿಯನ್ನು ಈ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೊಂದಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ’ಡ್ರೋನ್ ದೀದಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷಿ ರಂಗದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಡ್ರೋನ್ಗಳನ್ನು ವಿತರಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ೧೫ ಸಾವಿರ ಡ್ರೋನ್ಗಳನ್ನು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ನೀಡುವ ಗುರಿ ಹೊಂದಲಾಗಿದ್ದು, ಡ್ರೋನ್ಗಳನ್ನು ಬಳಕೆ ಮಾಡಲು ಮಹಿಳೆಯರಿಗೆ ಅಗತ್ಯವಾದ ತರಬೇತಿಯನ್ನು ಸಹ ನೀಡಲಾಗುವುದು. ದಿಯೋಘರ್ನ ಏಮ್ಸ್ನಲ್ಲಿ ೧೦ ಸಾವಿರದ ಜನೌಷಧಿ ಕೇಂದ್ರಗಳನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದರು. ದೇಶಾದ್ಯಂತ ೧೦ ಸಾವಿರದಿಂದ ೨೫ ಸಾವಿರ ಜನೌಷಧಿ ಕೇಂದ್ರಗಳಿಗೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ೨೦೪೭ನೇ ಇಸವಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಧಾನಿಯವರ ಈ ವಿಕಸಿತ ಭಾರತ ಸಂಕಲ್ಪ ಯಾತ್ರೆ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್
