ಬೀದರ, 27 ನವೆಂಬರ್ (ಹಿ.ಸ):
ಆ್ಯಂಕರ್ : ವಿಶ್ವ ಕನ್ನಡಿಗರ ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಅವರು ತಿಳಿಸಿದ್ದಾರೆ.
ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋರಚಿಂಚೋಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಭಜನೆಯಲ್ಲಿ ಭಾಗವಹಿಸುತ್ತಿದ್ದರಲ್ಲದೆ, ನಾಟಕದಲ್ಲಿ ಬಾಲನಟನಾಗಿ ನಟನೆ ಮಾಡಿದ್ದಾರೆ. ತಮ್ಮ ಶಿಕ್ಷಣ ಪೂರೈಸಿದ ಬಳಿಕ ವಾರ್ತಾಧಿಕಾರಿಯಾಗಿ ಬೀದರ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಮೈಸೂರು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಸುದೀರ್ಘ ಉತ್ತಮ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದಿದ್ದಾರೆ.
ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿಗೆ ಭಜನರಾಗಿದ್ದಾರೆ. ಧಾರವಾಡ ಆಕಾಶವಾಣಿಯಿಂದ ಬೆಳಿಗ್ಗೆ ಬಿತ್ತರಗೊಳ್ಳುವ ಪ್ರಾದೇಶಿಕ ವಾರ್ತೆಗಳ ಅತ್ಯುತ್ತಮ ವರದಿಗಾರ ಪ್ರಶಂಸನೆಗೆ ಪಾತ್ರರಾಗಿದ್ದಾರೆ. ಕಲಬುರಗಿಯ ಗಡಿನಾಡ ಸಂಗೀತ ಸೇವಾ ಸಂಸ್ಥೆಯು ಇವರ ತ್ರಿಭಾಷಾ ವಚನ ಗಾಯನದ ವಿಶೇಷತೆಯನ್ನು ಪರಿಗಣಿಸಿ ಗಡಿನಾಡ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆಯಲ್ಲದೆ ಅನೇಕ ಸಂಘ ಸಂಸ್ಥೆಗಳು ಸಹ ಸನ್ಮಾನಿಸಿವೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಸೇರಿದಂತೆ ರಾಜ್ಯಾದ್ಯಂತ ಆಯೋಜಿಸಲಾದ ಪ್ರಮುಖ ಉತ್ಸವಗಳಲ್ಲಿ ಗಜಲ್ ಗಾಯನ ಮತ್ತು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಬಸವಣ್ಣನವರ ವಚನ ಗಾಯನದ ಸಾಧನೆ ಹಾಗೂ ಬಹುಭಾಷಾ ಪತ್ರಿಕೆಗಳಲ್ಲಿ ರೈತರ ಯಶೋಗಾಥೆ, ಹಬ್ಬ ಹರಿದಿನಗಳ ವಿಶೇಷತೆಯನ್ನು ಸಾರುವ ಇವರ ಲೇಖನಗಳು ಪ್ರಕಟವಾಗಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬೀದರ ನಗರದ ಪೂಜ್ಯ ಡಾ. ಚೆನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ನವೆಂಬರ್ 27 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಸುಬ್ಬಣ್ಣ ಕರಕನಳ್ಳಿ ಅವರು ತಿಳಿಸಿದ್ದಾರೆ.
