ಕೋಲಾರ, ೧೫ ನವೆಂಬರ್ (ಹಿ.ಸ) :
ಆ್ಯಂಕರ್ : ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ ೧೯ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಳು, ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಬಾಲಕರಿಬ್ಬರ ಕಾರ್ನಿಯಾಗೆ ಗಾಯವಾಗಿದ್ದು, ನಗರದ ವಿವೇಕ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಿರುವುದಾಗಿ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ತಿಳಿಸಿದರು.
ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದೆ ಮತ್ತು ಸಿಡಿಸುವಾಗ ಜಾಗೃತಿ ವಹಿಸಬೇಕೆಂಬ ಅರಿವು ಜನರಲ್ಲಿ ಬಂದಿರುವ ಕಾರಣ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ, ಆಸ್ಪತ್ರೆಗೆ ಬಂದವರಲ್ಲಿ ಓರ್ವ ಯುವಕ ಸೇರಿದಂತೆ ಉಳಿದ ೮ ಮಂದಿ ೮ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದರು.
ಮುನ್ನಚ್ಚರಿಕೆ ದೃಷ್ಟಿಯಿಂದ ದಿನದ ೨೪ ಗಂಟೆಗಳು ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪೂರ್ಣ ದೃಷ್ಟಿಹಾನಿಯಂತಹ ಯಾವುದೇ ಪ್ರಕರಣಗಳು ವರದಿಯಾಗಲ್ಲ ಎಂದು ತಿಳಿಸಿ, ಪಟಾಕಿಗಿಂತ ಅದರಿಂದ ಸಿಡಿಯುವ ಮಣ್ಣು ಮಿಶ್ರಿತ ರಸಾಯನಿಕದಿಂದಲೂ ಹಾನಿಯಾಗಿದೆ ಎಂದರು.
ಹಿAದಿನ ವರ್ಷಗಳಿಗಿಂತ ಈ ಬಾರಿ ಪಟಾಕಿ ಸಿಡಿತದಿಂದಾಗಿ ಚಿಕಿತ್ಸೆಗೆ ಬಂದವರ ಸಂಖ್ಯೆ ಬಹಳಷ್ಟು ಕುಸಿತವಾಗಿದ್ದು, ಜನರಲ್ಲಿ ಜಾಗೃತಿ ಮೂಡಿರುವುದು ಮತ್ತು ಪರಿಸರ ಕಾಳಜಿಯಿಂದ ಹಸಿರು ಪಟಾಕಿ ಮಾತ್ರ ಸಿಡಿಸಲು ಮುಂದಾಗಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ವೈದ್ಯ ಹೆಚ್.ಆರ್.ಮಂಜುನಾಥ್ ಅವರು ಹೇಳುವಂತೆ ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು, ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ ಎಂದರು. ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು ಎಂದು ತಿಳಿಸಿ, ಒಟ್ಟಾರೆ ಜನರಲ್ಲಿ ಜಾಗೃತಿ ಮೂಡಿರುವುದೇ ಅನಾಹುತಗಳು ಕಡಿಮೆಯಾಗಲು ಕಾರಣ ಎಂದರು.
ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಯ್ಯಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಯಲಯಕ್ಕೆ ಕಾದ ಎಣ್ಣೆಯಿಂದ ಮೊಣಕಾಲು, ಮೊಣಕೈ ಸುಟ್ಟಹಾಗೂ ಸಣ್ಣಪುಟ್ಟ ಗಾಯಾಳುಗಳು ೧೦ಕ್ಕೂ ಹೆಚ್ಚು ಮಂದಿ ಬಂದು ಚಿಕಿತ್ಸೆ ಪಡೆದಿದ್ದಾರೆ, ವೈದ್ಯ ವಿ.ಮಂಜುನಾಥ್ ಹೇಳುವಂತೆ ಈ ಬಾರಿ ಅನಾಹುತಗಳ ಸಂಖ್ಯೆ ಕಡಿಮೆಯಾಗಿದೆ, ಜನರಲ್ಲಿ ಅರಿವು ಬಂದಿದೆ ಎಂದರು.
ಪ್ರತಿವರ್ಷ ಅಡುಗೆ ಎಣ್ಣೆ,ಪಟಾಕಿ ಬೆಂಕಿಯ ಸುಟ್ಟ ಗಾಯಗಳ ೨೫ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಾರಿ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿ,ಜನತೆಯಲ್ಲಿ ಮತ್ತಷ್ಟು ಅರಿವು ಮೂಡಲಿ ಎಂದು ಆಶಿಸಿದರು.
ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿರುವ ಒಂದು ಪ್ರಕರಣ ಜಿಲ್ಲಾಸ್ಪತ್ರೆಯಲ್ಲಿ ವರದಿಯಾಗಿದ್ದು, ಕಣ್ಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ವಿಜಯಕುಮಾರ್ ತಿಳಿಸಿದ್ದಾರೆ.
ಉಳಿದಂತೆ ಶಂಕರ್ ಕಣ್ಣಿನ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ, ಜಿಇಎಫ್ ರೋಟರಿ ಕಣ್ಣಾಸ್ಪತ್ರೆ ಮತ್ತಿತರರೆಡೆ ಪಟಾಕಿ ಅನಾಹುತದಿಂದ ಚಿಕಿತ್ಸೆಗೆ ಬಂದವರ ಸಂಖ್ಯೆ ಕಡಿಮೆಯಿದ್ದು, ಒಟ್ಟಾರೆ ಜನರಲ್ಲಿ ಅರಿವು ಮೂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಚಿತ್ರ : ಕೋಲಾರದ ವಿವೇಕ ನೇತ್ರಾಲಯದಲ್ಲಿ ಪಟಾಕಿ ಸಿಡಿತರಿಂದ ಕಣ್ಣಿನ ಕಾರ್ನಿಯಾಗೆ ಗಾಯವಾಗಿರುವ ಬಾಲಕಿಯೊಬ್ಬರಿಗೆ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ಚಿಕಿತ್ಸೆ ನೀಡಿದರು.
