ಕೋಲಾರ , 11ನವೆಂಬರ್ (ಹಿ.ಸ):
ಆ್ಯಂಕರ್ :
ಕೋಲಾರ ನಗರದ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಕೆಜಿಎಫ್ನಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಕ್ಕೆ ಅನುಮತಿ ನೀಡಿದ್ದೇನೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆ ಮಾಡುವುದಿಲ್ಲ. ಕೋಲಾರ ಹಾಲು ಒಕ್ಕೂಟಕ್ಕೆ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ.11) ಬಂಗಾರಪೇಟೆ ತಾಲ್ಲೂಕು ಯರಗೋಳ್ ಗ್ರಾಮದ ಬಳಿ ನಿರ್ಮಾಣ ಮಾಡಿರುವ ಯರಗೋಳ್ ಅಣೆಕಟ್ಟನ್ನು ಲೋಕಾರ್ಪಣೆ ಮಾಡಿ, ಭಾಗಿನ ಅರ್ಪಿಸಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಸಿ ವ್ಯಾಲಿ ಹಾಗೂ ಹೆಚ್.ಎನ್.ವ್ಯಾಲಿ ನೀರಾವರಿ ಕೊಟ್ಟಿದ್ದು ನಾನು (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿದ್ದಾಗ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೆಸಿ ವ್ಯಾಲಿ ವಿಷ ಎಂದು ಟೀಕೆ ಮಾಡುತ್ತಿದ್ದರು. ಆದರೆ ಕೆಸಿ ವ್ಯಾಲಿಗೆ ವಿಶ್ವಸಂಸ್ಥೆಯವರು ಶಬ್ಬಾಷ್ ಗಿರಿ ಕೊಟ್ಟಿದ್ದಾರೆ. ಇದು ಒಳ್ಳೆಯ ಯೋಜನೆ ಎಂದು ಹೇಳಿದ್ದಾರೆ. ಮಿಸ್ಟರ್ ಹೆಚ್ಡಿ ಕುಮಾರಸ್ವಾಮಿ ಕೇಳಿ ತಿಳಿದುಕೊಳ್ಳಿ ಎಂದು ವಾಗ್ದಾಳಿ ಮಾಡಿದರು.
ಕೆ.ಸಿ.ವ್ಯಾಲಿ ಮಾಡಬೇಡಿ, ಜನರಿಗೆ ವಿಷ ಕೊಡುತ್ತಾರೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದರು. ವಿಷದ ನೀರು ಎಂದು ಹೇಳುತ್ತಿದ್ದರು.
ಹಿಂದೂಸ್ತಾನ್ ಸಮಾಚಾರ್
