ನವದೆಹಲಿ,7 ನವೆಂಬರ್ (ಹಿ.ಸ):
ಆ್ಯಂಕರ್ :ಮಿಜೋರಾಂನ ಎಲ್ಲಾ ೪೦ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಛತ್ತೀಸ್ ಗಢದಲ್ಲಿ ಮೊದಲ ಹಂತದಲ್ಲಿ ಒಟ್ಟು ೯೦ ವಿಧಾನಸಭಾ ಸ್ಥಾನಗಳ ಪೈಕಿ ೨೦ ಸ್ಥಾನಗಳಿಗೆ ಇಂದು ಮತದಾನ ಪ್ರಗತಿಯಲ್ಲಿದೆ.
ಮಿಜೋರಾಂನಲ್ಲಿ, ರಾಜ್ಯದಾದ್ಯಂತ ಮತ್ತು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನೊಂದಿಗಿನ ಅಂತಾರಾಷ್ಟ್ರೀಯ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
೧೨೭೬ ಮತಗಟ್ಟೆಗಳಲ್ಲಿ ೮ ಲಕ್ಷ ೫೭ ಸಾವಿರಕ್ಕೂ ಹೆಚ್ಚು ಮತದಾರರು ಇವಿಎಂನಲ್ಲಿ ಮತಹಾಕುವ ಮೂಲಕ ೧೭೪ ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ. ಬೆಳಗ್ಗೆ ೭ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ.
ಛತ್ತೀಸ್ ಗಢದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಹಂತದಲ್ಲಿ ೨೨೩ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದು ಮತದಾನ ನಡೆಯಲಿರುವ ೨೦ ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನವು ಮಾವೋವಾದಿ ಚಟುವಟಿಕೆಗಳಿಂದ ಬಾಧಿತವಾಗಿವೆ.
ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ಷೇತ್ರಗಳಲ್ಲಿ ವ್ಯಾಪಕ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಈ ಮಧ್ಯೆ, ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯ ೪೩ ತಾಪಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆಯಲಿದೆ. ಐದು ವಲಯಗಳ ಅಡಿಯಲ್ಲಿ ೨೩ ಮತಗಟ್ಟೆಗಳಲ್ಲಿ ಒಟ್ಟು ೧೫ ಸಾವಿರ ೨೫೬ ಮತದಾರರು ಮತ ಚಲಾಯಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
