
ಅಬುಧಾಬಿ , 3 ನವೆಂಬರ್ (ಹಿ.ಸ):
ಆ್ಯಂಕರ್ :
ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದರು. ಈ ದೇವಾಲಯ ಭಾರತದ ಹೊರಗಿನ ಅತ್ಯಂತ ದೊಡ್ಡ ಹಾಗೂ ಸುಂದರವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗುತ್ತಿದೆ. ೨೦೨೪ರಲ್ಲಿ ದೇವಾಲಯ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ದೇವಾಲಯ ನಿರ್ಮಿಸುತ್ತಿರುವ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆಯ ಸ್ವಾಮಿ ಬ್ರಹ್ಮವಿಹಾರಿ ದಾಸ್, ನಿರ್ಮಾಣ ಸ್ಥಳಕ್ಕೆ ಸಚಿವ ಪ್ರಧಾನ್ ಅವರನ್ನು ಸ್ವಾಗತಿಸಿ, ದೇವಾಲಯದ ವಿವಿಧ ವೈಶಿಷ್ಟ್ಯಗಳು ಹಾಗೂ ಈವರೆಗಿನ ನಿರ್ಮಾಣದ ಪ್ರಗತಿ ವಿವರಿಸಿದರು. ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ದೇವಾಲಯ ಮಹತ್ವದ ಕುರಿತು ಸಚಿವರಿಗೆ ವಿವರಿಸಿದರು. ಬಿಎಪಿಎಸ್ ಹಿಂದೂ ದೇವಾಲಯ ನಿರ್ಮಾಣದ ನನಸು ಮಾಡುವಲ್ಲಿ ನಿರಂತರ ಬೆಂಬಲ ನೀಡಿದ ಯುನೈಟೆಡ್ ಅರಬ್ ಎಮಿರೇಟ್ಸ್ನ ನಾಯಕತ್ವಕ್ಕೆ ಸಚಿವ ಪ್ರಧಾನ್ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಯುಎಇಯಲ್ಲಿ ಶ್ರೀಮಂತ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಉತ್ತೇಜಿಸುವಲ್ಲಿ, ಉಭಯ ರಾಷ್ಟ್ರಗಳ ನಡುವೆ ನಿರಂತರ ಬಾಂಧವ್ಯ ಬಲಪಡಿಸುವಲ್ಲಿ ದೇವಾಲಯದ ಮಹತ್ವವನ್ನು ಸಚಿವರು ಒತ್ತಿ ಹೇಳಿದರು. ದೇವಾಲಯ ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆ, ಅಬುಧಾಬಿಯ ಹೃದಯಭಾಗದಲ್ಲಿ ಏಕತೆ ಮತ್ತು ಆಧ್ಯಾತ್ಮಿಕತೆಯ ದಾರಿದೀಪವಾಗಿ ನಿಲ್ಲಲಿದ್ದು, ಈ ಎರಡು ರಾಷ್ಟ್ರಗಳ ನಡುವಣ ಬಲವಾದ ಬಾಂಧವ್ಯ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಅವರ ಬದ್ಧತೆ ಬಲಪಡಿಸುತ್ತದೆ ಎಂದು ಸಚಿವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ೨೦೧೮ರಲ್ಲಿ ಯುಎಇಯ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಹಿಂದೂಸ್ತಾನ್ ಸಮಾಚಾರ್
