
ನವದೆಹಲಿ,31ಅಕ್ಟೋಬರ್ (ಹಿ.ಸ):
ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸ ಆರಂಭಿಸಿದ್ದಾರೆ. ಬನಸ್ಕಾಂತದಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಅಂಭಾಜಿ ದೇಗುಲದಲ್ಲಿ ಪೂಜೆ ನೆರವೇರಿಸಿ ದರ್ಶನ ಪಡೆದುಕೊಂಡರು. ನಂತರ ಮೆಹಸಾನದಲ್ಲಿ ಅವರು ಸುಮಾರು ೫ ಸಾವಿರದ ೮೦೦ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಾಳೆ ಪ್ರಧಾನಿಯವರು ಏಕತಾ ಪ್ರತಿಮೆಯ ಸ್ಥಳದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತು ಏಕತಾ ನಗರದಲ್ಲಿ ವಿವಿಧ ಪ್ರವಾಸಿ ಕೇಂದ್ರಿತ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ. ಆರಂಭ್ ೫.೦ ನಲ್ಲಿ ೯೮ನೇ ಕಾಮನ್ ಫೌಂಡೇಷನ್ ಕೋರ್ಸ್ ನ ಅಧಿಕಾರಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಇಂದು ಮೆಹ್ಸಾನಾ ಜಿಲ್ಲೆಯ ದಾಭೋಡಾದಲ್ಲಿ ರೈಲು, ರಸ್ತೆ, ಕುಡಿಯುವ ನೀರು ಮತ್ತು ನೀರಾವರಿಯಂತಹ ಬಹು ವಲಯಗಳ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಈ ಯೋಜನೆಗಳು ಉತ್ತರ ಮತ್ತು ಮಧ್ಯ ಗುಜರಾತ್ ನ ಬನಸ್ಕಾಂತ, ಮೆಹ್ಸಾನಾ, ಪಟಾನ್, ಅಹಮದಾಬಾದ್ ಮತ್ತು ಗಾಂಧಿನಗರ ಸೇರಿದಂತೆ ಏಳು ಜಿಲ್ಲೆಗಳಿಗೆ ಪ್ರಯೋಜನ ಒದಗಿಸಲಿವೆ. ಸುಮಾರು ೩ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಹೊಸ ಭಂಡು-ನ್ಯೂ ಸನಂದ್ ವಿಭಾಗಕ್ಕೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ೧೮೨ ಕಿಲೋಮೀಟರ್ ದ್ವಿರಂಗಮ್ – ಸಮಖಿಯಾಲಿ. ಕಟೋಸನ್ ರಸ್ತೆ- ಬೆಚ್ರಾಜಿ ರೈಲು ಯೋಜನೆಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ. ಮೆಹ್ಸಾನಾ ಮತ್ತು ಗಾಂಧಿನಗರ ಜಿಲ್ಲೆಗಳ ವಿವಿಧ ಗ್ರಾಮಗಳ ಕೆರೆಗಳ ಪುನಶ್ಚೇತನ ಯೋಜನೆಯನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. ಅಲ್ಲದೇ, ಮೆಹ್ಸಾನಾ ಜಿಲ್ಲೆಯ ಸಬರಮತಿ ನದಿಗೆ ವಲಸಾನ ಬ್ಯಾರೇಜ್, ಬನಸ್ಕಾಂತದಲ್ಲಿ ಕುಡಿಯುವ ನೀರು ಒದಗಿಸುವ ಎರಡು ಯೋಜನೆಗಳು, ಮತ್ತು ಧರೋಯ್ ಅಣೆಕಟ್ಟು ಆಧಾರಿತ ಪಾಲನ್ಪುರ ಲೈಫ್ಲೈನ್ ಯೋಜನೆಗೆ ಕೂಡಾ ಚಾಲನೆ ನೀಡಲಾಗುವುದು ಎಂದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
